ಅಭಿಪ್ರಾಯ / ಸಲಹೆಗಳು

ಅಧ್ಯಕ್ಷರ ಸಂದೇಶ

ಮಾಜಿ ಅಧ್ಯಕ್ಷರ ಮಾತು

ಭಟ್ಕಳದ ನವಾಯತ್, ಬೇರೆ ಭಾಗದ ದಖನಿಗಳು, ಗುಜರಾತಿನ ಮೆಮನ್ ಇವರೆಲ್ಲಾ ಮುಸ್ಲಿಮ್ ಸಮುದಾಯದ ಒಂದು ಅವಿಭಾಜ್ಯ ಅಂಗವಾಗಿರುವ ಹಾಗೆಯೇ, ಬ್ಯಾರಿ ಜನಾಂಗದ ಜನರು ಸ್ವಂತ ಭಾಷೆ, ಸಂಸ್ಕೃತಿಯನ್ನು ಬೆಳೆಸಿ ಸಾಧಾರಣ ೧೩೦೦ ವರ್ಷಗಳಿಂದ ಈ ನೆಲದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪೋರ್ಚುಗೀಸ್ ಹಾಗೂ ಇಂಗ್ಲಿಷರ ಆಡಳಿತಕ್ಕೆ ಮೊದಲು, ಬ್ಯಾರಿ ಮುಸ್ಲಿಮರು, ಉತ್ತಮ ರೀತಿಯಲ್ಲಿ ಜೊತೆಯಾಗಿ ಕಾಸರಗೋಡಿನ ಚಂದ್ರಗಿರಿ ನದಿಯ ತೀರದಿಂದ ಕುಂದಾಪುರದ ಬಾರ್ಕೊರಿನವರೆಗೆ ಇದ್ದು ಜೀವನ ಸಾಗಿಸುತ್ತಿದ್ದರು. ಪೋರ್ಚುಗೀಸ್ ಮತ್ತು ಇಂಗ್ಲಿಷರು ಮುಸ್ಲಿಮ್ ಜನರನ್ನು ಮತಾಂತರ ಮಾಡುತ್ತಾರೆಂಬ ಹೆದರಿಕೆಯಿಂದ ಬ್ಯಾರಿಗಳಿಗೆ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡದಿರುವ ಮೂಲಕ ಜಗತ್ತಿನ ಜ್ಣಾನವನ್ನು ದೂರಮಾಡಿದ ಬ್ಯಾರಿ ನೇತಾರರು ಮತ್ತು ಧಾರ್ಮಿಕ ನೇತಾರರು ಧಾರ್ಮಿಕ ವಿದ್ಯೆಗೆ ಮಾತ್ರ ಹೆಚ್ಚಿನ ಮಹತ್ವ ಕೊಟ್ಟರು. ಹಾಗಾಗಿ ಇಂಗ್ಲಿಷರು ಭಾರತ ದೇಶದಲ್ಲಿ ತಂದ ಇಂಗ್ಲಿಷ್ ವಿದ್ಯಾಭ್ಯಾಸ ಜ್ಣಾನದ ಆಂದೋಲನದ ಫಲಿತಾಂಶ ಬ್ಯಾರಿ ಮುಸ್ಲಿಮರಿಗೆ ಸಿಗದೆ ಜಗತ್ತಿನ ಜೀವನದಲ್ಲಿ ಬಹಳಷ್ಟು ಹಿಂದೆ ಬಿದ್ದರು. ಹಾಗಾಗಿ ೧೬೦೦ನೇ ಇಸವಿಯಿಂದ ಹಿಡಿದು ೧೯೮೦ ಇಸವಿ ತನಕ ಇಂಗ್ಲಿಷ್ ವಿದ್ಯಾಭ್ಯಾಸದಲ್ಲೂ ಬ್ಯಾರಿಗಳು ತುಂಬಾ ಹಿಂದೆ ಬಿದ್ದರು.

೧೭೯೯ನೇ ಇಸವಿ ತನಕ ಹೈದರಾಲಿ ಮತ್ತು ಟಿಪ್ಪುವಿನ ಆಡಳಿತವು ಮೈಸೂರು ರಾಜ್ಯಕ್ಕೆ ಒಳಪಟ್ಟಿತ್ತು. ೧೭೯೯ನೇ ಇಸವಿಯಲ್ಲಿ ಟಿಪ್ಪು ಸುಲ್ತಾನ್ ರಣರಂಗದಲ್ಲಿ ಮೃತಪಟ್ಟಾಗ ಬ್ರಿಟಿಷರು (ಕಿನಾರ) ಕೆನರಾ ಜಿಲ್ಲೆಯನ್ನು ಅಸ್ತಿತ್ವಕ್ಕೆ ತಂದರು. ಆಗ ಕೆನರಾ ಜಿಲ್ಲೆ ಆಗಿನ ಮುಂಬೈ ರಾಜ್ಯಕ್ಕೆ ಸೇರಿತ್ತು. ೧೮೬೨ನೇ ಇಸವಿಯಲ್ಲಿ ಸೌತ್ ಕೆನರಾ ಜಿಲ್ಲೆ, ನಾರ್ತ್ ಕೆನರಾ ಜಿಲ್ಲೆ ಎಂಬ ಎರಡು ಜಿಲ್ಲೆಯನ್ನು ಅಸ್ತಿತ್ವಕ್ಕೆ ತಂದು ಕಾಸರಗೋಡು, ಮಂಗಳೂರು ಮತ್ತು ಉಡುಪಿ ಸೇರಿದ ಸೌತ್ ಕೆನರಾ ಜಿಲ್ಲೆ ಮದ್ರಾಸ್ ರಾಜ್ಯಕ್ಕೆ ಸೇರಿತು. ಅದರ ನಂತರ ೧-೧೧-೧೯೫೬ರಲ್ಲಿ ಕಾಸರಗೋಡು ಕೇರಳಕ್ಕೂ ದಕ್ಷಿಣ ಕನ್ನಡ ಉಡುಪಿ ಸೇರಿದ ಸೌತ್ ಕೆನರಾ ಜಿಲ್ಲೆ ಮೈಸೂರು (ಕರ್ನಾಟಕ) ರಾಜ್ಯಕ್ಕೆ ಸೇರಿತು. ಅದರ ನಂತರ ೧೯೯೫ರಲ್ಲಿ ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂತು.

೧೯೮೦ರ ನಂತರ ಗಲ್ಫ್ ದೇಶದ ಉದ್ಯೋಗಕ್ಕಾಗಿಯೂ, ವ್ಯಾಪಾರಕ್ಕಾಗಿಯೂ ಬ್ಯಾರಿಗಳು ದೇಶದ ಹಾಗೂ ರಾಜ್ಯದ ಹೊರಗೆ ಹೋಗಿ ಜೀವನ ನಡೆಸಿದರು. ಹಾಗಾಗಿ ಈಗ ಬ್ಯಾರಿಗಳು ಕಾಸರಗೋಡಿನ ಮಂಜೇಶ್ವರ ಪ್ರದೇಶದಲ್ಲೂ, ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಡಿಕೇರಿ, ಮೈಸೂರು, ಬೆಂಗಳೂರು ಮೊದಲಾದ ಜಿಲ್ಲೆಗಳಲ್ಲೂ, ಮಹಾರಾಷ್ಟ್ರದ ಪೂನಾ, ಮುಂಬೈಯಲ್ಲೂ, ಗುಜರಾತಿನ ಪೋರಬಂದರಿನಲ್ಲೂ, ಸೌದಿ, ಕುವೈತ್ ಗಳಂತಹ ಗಲ್ಫ್ ರಾಷ್ಟ್ರಗಳಲ್ಲೂ, ಇಂಗ್ಲೆಂಡ್, ಅಮೇರಿಕ, ಆಸ್ಟ್ರೇಲಿಯ, ನ್ಯೂಜಿಲೆಂಡ್, ಇಂಡೋನೇಷ್ಯಾ, ಶ್ರೀಲಂಕಾ, ಚೀನಾ ಮೊದಲಾದ ರಾಷ್ಟ್ರಗಳಲ್ಲೂ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಬ್ಯಾರಿಗಳ ವ್ಯವಹಾರ ವ್ಯಾಪಾರ, ಭಾಷೆ ಈ ವಿಷಯಗಳಲ್ಲಿ ಹಾಗೂ ಸಂಸ್ಕೃತಿಯಲ್ಲಿ ತುಂಬಾ ಬದಲಾವಣೆಗಳಾದವು. ೧೬೦೦ನೇ ಇಸವಿಯಿಂದ ೧೯೮೦ನೇ ಇಸವಿ ತನಕ ಹೆಚ್ಚಿನ ಬ್ಯಾರಿಗಳ ಜೀವನವು ತುಂಬಾ ಕಷ್ಟದಲ್ಲಿತ್ತು. ವಿದ್ಯಾಭ್ಯಾಸ ಇಲ್ಲದೆ ಸರಕಾರಿ, ಅರೆ ಸರಕಾರಿ ನೌಕರಿ ಸಿಗದೆ, ವ್ಯಾಪಾರ ಮಾಡಲಾಗದೆ ಬಡತನದಲ್ಲಿ ಜೀವನ ಸಾಗಿಸುವಂತಾಯಿತು. ೧೯೮೦ರ ನಂತರ ಗಲ್ಫ್ ಉದ್ಯೋಗ ಬ್ಯಾರಿಗಳ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಿತ್ತು.

೧೯೮೭ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಇದ್ದ ಬ್ಯಾರಿಗಳು ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಸ್ಥಾಪನೆ ಮಾಡಿ ಬ್ಯಾರಿ ಆಂದೋಲನದಲ್ಲಿ ತೊಡಗಿದರು. ೧೯೯೭ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಬ್ಯಾರಿ ಸಮ್ಮೇಳನ ಮಾಡಿ ಬ್ಯಾರಿಗಳ ವೈಭವವನ್ನು ಬ್ಯಾರಿಗಳಿಗೂ ಬೇರೆಯವರಿಗೂ ಪರಿಚಯಿಸಿದರು. ಅದರ ನಂತರ ಮಂಗಳೂರು ಮತ್ತು ಬಂಟ್ವಾಳದಲ್ಲಿ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ನೇತೃತ್ವದಲ್ಲಿ ೧ನೇ ಬ್ಯಾರಿ ಸಾಹಿತ್ಯ ಸಮ್ಮೇಳನ, ೨ನೇ ಬ್ಯಾರಿ ಸಾಹಿತ್ಯ ಸಮ್ಮೇಳನ ನಡೆಯಿತು. ಅದರ ನಂತರ ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಉಡುಪಿಯಲ್ಲಿ ೩ನೇ ಬ್ಯಾರಿ ಸಾಹಿತ್ಯ ಸಮ್ಮೇಳನ, ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟ ಹಾಗೂ ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತಿನ ಜಂಟಿ ಆಶ್ರಯದಲ್ಲಿ ಚಿಕ್ಕಮಗಳೂರಿನಲ್ಲಿ ೩೦೦೭ರಲ್ಲಿ ೪ನೇ ಬ್ಯಾರಿ ಸಾಹಿತ್ಯ ಸಮ್ಮೇಳನ ನಡೆಯಿತು. ಈ ಬ್ಯಾರಿ ಆಂದೋಲನ ಮತ್ತು ಸಾಹಿತ್ಯ ಸಮ್ಮೇಳನದಲ್ಲಿ ಬ್ಯಾರಿ ಭಾಷೆಯಲ್ಲೂ ಕನ್ನಡ ಭಾಷೆಯಲ್ಲೂ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಪುಸ್ತಕಗಳು ಸಿ.ಡಿ ಮತ್ತು ಕ್ಯಾಸೆಟ್ ಗಳು ಪ್ರಕಟಗೊಂಡವು. ಅಖಿಲ ಭಾರತ ಬ್ಯಾರಿ ಪರಿಷತ್, ಬ್ಯಾರಿ ಕಲಾರಂಗ, ಬ್ಯಾರೀಸ್ ಕಲ್ಚರಲ್ ಪೋರಮ್, ಬ್ಯಾರೀಸ್ ವೆಲ್ಫೇರ್ ಪೋರಮ್ ಮೊದಲಾದ ಸಂಘಟನೆಗಳು ಅಸ್ತಿತ್ವಕ್ಕೆ ಬಂದು ಹೆಚ್ಚಿನ ಕಾರ್ಯಕ್ರಮ ನಡೆಸಿಕೊಟ್ಟರು.

೨೦೦೬ ರಲ್ಲಿ ಚಿಕ್ಕಮಗಳೂರು ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಸರಕಾರವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಘೋಷಣೆ ಮಾಡಿ ೨೦೦೭ರ ಅಕ್ಟೋಬರ್ ೩ರಂದು ಗಜೆಟ್ ನೋಟಿಫಿಕೇಶನ್ ಮಾಡಿತು. ಆದರೆ ಪ್ರಥಮ ಅಧ್ಯಕ್ಷರನ್ನಾಗಿ ಎಂ.ಬಿ ಅಬ್ದುಲ್ ರಹ್ ಮಾನ್ ರವರನ್ನು ನೇಮಕ ಮಾಡಿದ್ದು ೨೦೦೯ನೇ ಇಸವಿಯಲ್ಲಿ. ಇವರ ೩ ವರ್ಷ ಅವಧಿಯ ನಂತರ ೨ನೇ ಅಧ್ಯಕ್ಷರಾಗಿ ರಹೀಮ್ ಉಚ್ಚಿಲ್ ಇವರ ನೇಮಕ ಆಯಿತು. ಇವರ ಒಂದೂವರೆ ವರ್ಷದ ಅವಧಿಯಲ್ಲಿ ಬದಲಾವಣೆ ಆಗಿ ಅದರ ನಂತರ ೧೦ ತಿಂಗಳವರೆಗೆ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಆಗಿರಲಿಲ್ಲ.

೨೬-೨-೨೦೧೪ರಂದು ೩ನೇ ಅವಧಿಗೆ ನನ್ನನ್ನು ಅಧ್ಯಕ್ಷನನ್ನಾಗಿಯೂ ಬೇರೆ ೧೦ ಮಂದಿ ಸದಸ್ಯರನ್ನೂ ಕರ್ನಾಟಕ ಘನ ಸರಕಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ನೇಮಕ ಮಾಡಿತು. ಆ ಕೂಡಲೇ ಪಾರ್ಲಿಮೆಂಟ್ ಚುನಾವಣೆ ಘೋಷಣೆ ಆಗಿ ಮೇ ೧೬ನೇ ತಾರೀಕಿನವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣದಿಂದಾಗಿ ಜನ ಪ್ರತಿನಿಧಿಗಳನ್ನು ಸೇರಿಸಿ ಕಾರ್ಯಕ್ರಮ ಮಾಡುವ ಅವಕಾಶ ಇರಲಿಲ್ಲ. ಆದರೂ ಬ್ಯಾರಿ ಸಾಹಿತ್ಯ, ಕಲೆ, ಸಂಸ್ಕೃತಿ ಭಾಶೆಯ ಬೆಳವಣಿಗೆಗೆ ಬೇಕಾದ ಕಛೇರಿ ಪತ್ರ ವ್ಯವಹಾರ, ಬೆಲ್ಕಿರಿ ದ್ವೈಮಾಸಿಕ ಪ್ರಕಟನೆ, ಬ್ಯಾರಿ ಭವನಕ್ಕೆ ಜಾಗದ ಹುಡುಕಾಟ, ಬ್ಯಾರಿ ಅಧ್ಯಯನ ಪೀಠ ಸ್ಥಾಪನೆಗೆ ಬೇಕಾದ ಕೆಲಸ, ಬ್ಯಾರಿ ಸಾಕ್ಷ್ಯಚಿತ್ರ ನಿರ್ಮಾಣ ಮಾಡುವ ಕೆಲಸ, ಬ್ಯಾರಿ-ಕನ್ನಡ-ಇಂಗ್ಲಿಷ್ ಅರ್ಥಕೋಶವನ್ನು ತಯಾರು ಮಾಡುವ ಬಗ್ಗೆ ವಿದ್ವಾಂಸರ ಜೊತೆ ಚರ್ಚೆ, ಬ್ಯಾರಿ ಭಾಷೆ ಮತ್ತು ಸಂಸ್ಕೃತಿಯ ಅಧ್ಯಯನ ರೂಪುರೇಷೆ, ೭೫ ವರ್ಷ ಮೀರಿರುವ ಬ್ಯಾರಿ ಹಿರಿಯರ ಮನೆಗೆ ಹೋಗಿ ಅವರ ಮನೆಯ ಅಂಗಳದಲ್ಲಿ ಅವರ ಜೊತೆ ಮಾತುಕತೆ ನಡೆಸಿ ಅವರ ಅನುಭವದ ದಾಖಲೀಕರಣ ಮಾಡುವುದು, ಮಂಗಳೂರಿನ ಆಕಾಶವಾಣಿಯಲ್ಲಿ ವಾರಕ್ಕೆ ಒಂದು ಬಾರಿಯಾದರೂ ಬ್ಯಾರಿ ವಾರ್ತೆ ಪ್ರಸಾರಕ್ಕಾಗಿ ಹಾಗೂ ತಿಂಗಳಿಗೊಮ್ಮೆಯಾದರೂ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸಾರ ಮಾಡುವ ಬಗ್ಗೆ ಕ್ರಮ, ಆತೂರು ಮತ್ತು ಉಳ್ಳಾಲದಲ್ಲಿ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೇಳ, ಬ್ಯಾರಿ ಗೌರವ ಪ್ರಶಸ್ತಿ ವಿಜೇತರೊಂದಿಗೆ ಸಾಹಿತ್ಯ ಕೂಟ, ಬೆಂಗಳೂರಿನಲ್ಲಿ ಎಲ್ಲಾ ಅಕಾಡೆಮಿಗಳ ಕೂಡುವಿಕೆಯಿಂದ ವಸಂತ ಸಂಭ್ರಮ ಕೂಟ, ವಿಧಾನಸೌಧದಲ್ಲಿ ರಾಜ್ಯ ಮಾತೃ ಭಾಷಾ ನೀತಿಯ ಬಗ್ಗೆ ಅಭಿಪ್ರಾಯ ಮಂಡನೆ ಹೀಗೆ ಎಲ್ಲಾ ಕಾರ್ಯಕ್ರಮಗಳನ್ನು ಉತ್ತಮ ರೀತಿಯಿಂದ ನಡೆಸಿದ್ದೇವೆ. ಬ್ಯಾರಿ ಭಾಷೆ ಸಂಸ್ಕೃತಿಯ ಬೆಳವಣಿಗೆಗೆ ೮೦೦ ಬ್ಯಾರಿ ಜಮಾಅತ್ ಗಳಿಗೆ ಪತ್ರ ಕೂಡಾ ಬರೆದಿದ್ದೇವೆ. ದಿನಾಂಕ ೩-೧೦-೨೦೧೪ರಂದು ಬ್ಯಾರಿ ಭಾಷಾ ದಿನಾಚರಣೆ ಕೂಡಾ ನಡೆಯಲಿಕ್ಕಿದೆ. ಇನ್ ಶಾ ಅಲ್ಲಾಹ್.

ಇನ್ನೂ ತುಂಬಾ ಕೆಲಸ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಡೆಸಲು ಪ್ರಯತ್ನ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರ ಇರಲಿ, ನಿಮ್ಮ ಅಭಿಪ್ರಾಯ ಬರೆದು ಕಳುಹಿಸಿ.

ಬಿ.ಎ. ಮುಹಮ್ಮದ್ ಹನೀಫ್

 

ಮಾಜಿ ಅಧ್ಯಕ್ಷರ ಮಾತು

 

ಎಲ್ಲಾ ಬ್ಯಾರಿ ಭಾಂಧವರಿಗೆ ಪ್ರೀತಿಯ ಅಸ್ಸಲಾಮ್ ಅಲೈಕುಮ್. ಬ್ಯಾರಿಯೇತರರಿಗೆ ಆತ್ಮೀಯ ನಮಸ್ಕಾರಗಳು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿ ದಿನಾಂಕ: ೦೬-೦೨-೨೦೧೨ ರಂದು ಅಧಿಕಾರ ಸ್ವೀಕಾರ ಮಾಡಿದ್ದೇನೆ. ನಾನು ನಿರ್ದಿಷ್ಟ ರಾಜಕೀಯ ಪಕ್ಷವೊಂದರಲ್ಲಿ ಪದಾಧಿಕಾರಿಯಾಗಿದ್ದರೂ ಅಕಾಡೆಮಿಯಲ್ಲಿ ಎಂದೂ ರಾಜಕೀಯ ನುಸುಳಲು ಬಿಡುವುದಿಲ್ಲ ಎಂದು ಪ್ರಾರಂಭದಲ್ಲಿಯೇ ಭರವಸೆ ನೀಡಿದ್ದೆ. ಅದರಂತೆ ನಡೆದಿದ್ದೇನೆ ಎಂಬ ಸಂತೋಷ ನನಗಿದೆ. ಆರಂಭದಲ್ಲಿ ಅಕಾಡೆಮಿ ಯಾವ ರೀತಿಯಲ್ಲಿ ಮುಂದುವರಿಯಬೇಕು ಎಂಬ ವಿಚಾರದಲ್ಲಿ ಬ್ಯಾರಿ ಸಮುದಾಯದ ಪ್ರಮುಖರ ಸಭೆ ಕರೆದು ಅಭಿಪ್ರಾಯ ಸಂಗ್ರಹ ಮಾಡಿದ್ದೆ. ಹಲವಾರು ಮಂದಿ ನನಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ್ದರು. ಇನ್ನು ಕೆಲವರು ನನ್ನ ಬಗ್ಗೆ ಹಲವಾರು ಅಪಪ್ರಚಾರಗಳನ್ನು ಹರಡಿಸಿದ್ದರು. ಕೆಲವರು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಕೆಲವರು ಟೀಕೆಯನ್ನು ಮಾಡುತ್ತಾ ಬಂದರು. ಆದರೆ ಇದು ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳಲಿಲ್ಲ. ಅಲ್ಲಾಹನು ನೀಡಿದ ಅಧಿಕಾರವನ್ನು ದುರುಪಯೋಗಪಡಿಸಿದರೆ ನಾಳೆಯ ದಿನ ಉತ್ತರ ನೀಡಬೇಕಾಗುತ್ತದೆ ಎಂಬ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡು ಬಂದಿದ್ದೇನೆ. ನಾನು ಅಧ್ಯಕ್ಷನಾದ ಬಳಿಕ ಅಕಾಡೆಮಿಯ ಸದಸ್ಯರ ಸಹಕಾರದಲ್ಲಿ –

೧. ಬ್ಯಾರಿ ಅಕಾಡೆಮಿ ಮುನ್ನೊಲುಗು (ಮಂಗಳೂರು) ೨. ನೋಂಬುಲೊರು ಸಾಹಿತ್ಯ ಮೋಂದಿ (ಕುಂದಾಪುರ) ೩. ಪೆರ್ನಾಲ್ ಸಂದೋಲ (ಮಂಗಳೂರು ಪುರಭವನದಲ್ಲಿ) ೪. ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್ (ಬಂಟ್ವಾಳ ವಿಧಾನಸಭಾ ಕ್ಷೇತ್ರದ ಹತ್ತು ಕಡೆಗಳಲ್ಲಿ) ೫. ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್ (ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಹತ್ತು ಕಡೆಗಳಲ್ಲಿ) ೬. ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್ (ಮಂಗಳೂರು ವಿಧಾನಸಭಾ ಕ್ಷೇತ್ರದ ಹತ್ತು ಕಡೆಗಳಲ್ಲಿ) ೫. ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್ (ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಹತ್ತು ಕಡೆಗಳಲ್ಲಿ) ೮. ೨೦೧೧ರ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭ (ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ) ೯. ಬೆಲಿಯೆ ಪೆರ್ನಾಲ್ ಸಂದೋಲ ಕಲಾಸ್ಪರ್ದೆ (ಪುತ್ತೂರಿನ ಮಾಣಿ ದಾರುಲ್ ಇರ್ಶಾದ್ ವಿದ್ಯಾಸಂಸ್ಥೆಯ ಬಡ ಮಕ್ಕಳೊಂದಿಗೆ) ೧೦. ಬ್ಯಾರಿ ಸಾಹಿತ್ಯ ಸಾಂಸ್ಕೃತಿಕ ಸೌಹಾರ್ದ ಮೇಳ (ಮೈಸೂರಿನಲ್ಲಿ) ೧೧. ೫. ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್ (ಮೈಸೂರು ಜಿಲ್ಲೆಯ ಚಾಮರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಹತ್ತು ಕಡೆಗಳಲ್ಲಿ) ೧೨. ಬ್ಯಾರಿ ಸಾಹಿತ್ಯತ್ತ್ ಲ್ ಒರ್ಮಪ್ಪಾಡ್ ಪಿರ್ಸಪ್ಪಾಡ್ (ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ) ೧೩. ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್ (ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಹತ್ತು ಕಡೆಗಳಲ್ಲಿ) ೧೪. ಈದ್ ಮಿಲನ್ ಪ್ರತಿಭಾ ಸೌಹಾರ್ದ ಸಂದೇಶೋತ್ಸವ ( ಗುಲ್ವಾಡಿ ಉಡುಪಿ ಜಿಲ್ಲೆ) ೧೫. ರಾಜ್ಯ ಮಟ್ಟ ದ ದಫ್ ಹಾಗೂ ಸಾಂಸ್ಕೃತಿಕ ಉತ್ಸವ ( ಹಯಾತುಲ್ ಇಸ್ಲಾಂ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆ ಗೂಡಿನ ಬಳಿಯಲ್ಲಿ) ….. ಈಗೆ ಹತ್ತು ಹಲವಾರು ಕಾರ್ಯಕ್ರಮ ನೀಡಿ ಬ್ಯಾರಿ ಕಲೆ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಹಳ್ಳಿ-ಹಳ್ಳಿಗೆ ಕೊಂಡೊಯ್ದು ಪ್ರಚಾರ ನಡೆಸಿದ್ದೇನೆ. ಹಲವಾರು ಕಲಾವಿದರಿಗೆ ಪ್ರೊತ್ಸಾಹ ನೀಡಿದ್ದೇನೆ. ಬ್ಯಾರಿ ಜನಾಂಗದ ಶ್ರೀಮಂತ ಕಲೆಯಾದ ದಫ್, ಒಪ್ಪನ, ಕೋಲ್ಕಲಿ, ಮೊÊಲಾಂಜಿ ಹಾಡು, ಬ್ಯಾರಿ ಜನಪದ ಗೀತೆಗಳು, ಬ್ಯಾರಿ ಬುರ್ದಾ ಹೀಗೆ ಹತ್ತು ಹಲವಾರು ಬ್ಯಾರಿ ಸಾಂಸ್ಕೃತಿಕ ಕಲೆಗಳನ್ನು ಇತರರಿಗೆ ಪರಿಚಯಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದೇನೆ.

ಇದು ಅಕಾಡೆಮಿಯ ಮೂಲ ಉದ್ದೇಶವಾದರೂ ಇದರಿಂದ ನಾನು ಸಂತೃಪ್ತನಾಗಿಲ್ಲ. ಇದೀಗ ಮೂವತ್ತು ಲಕ್ಷದಷ್ಟಿರುವ ಬ್ಯಾರಿ ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುವ ಸಮಗ್ರ ಬ್ಯಾರಿಗಳ ಹಿತವನ್ನು ಕಾಯುವ ಬ್ಯಾರಿಗಳ ಮಾಹಿತಿ ಕೇಂದ್ರದಂತೆ ಕಾರ್ಯಾಚರಿಸುವ ಬ್ಯಾರಿ ಭವನ ಇದರ ನಿರ್ಮಾಣದ ಕನಸನ್ನು ಕಂಡಿದ್ದೇನೆ. ಇದಕ್ಕಾಗಿ ಸೂಕ್ತ ನಿವೇಶನ ಗುರುತಿಸಿ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಕೆಲವೇ ದಿನಗಳಲ್ಲಿ ಸಮಸ್ತ ಬ್ಯಾರಿಗಳ ಕನಸು ನನಸಾಗಲಿದೆ.

ಸುಮಾರು ಹದಿನಾರಿ ಸಾವಿರ ಸಬ್ದಗಳನ್ನೊಳಗೊಂಡ ಬ್ಯಾರಿ ಕನ್ನಡ-ಮಳಯಾಲ-ಇಂಗ್ಲಿಷ್ ನಿಘಂಟನ್ನು (ಡಿಕ್ಷನರಿ) ಹೊರತರಬೇಕೆಂಬ ಪ್ರಯತ್ನದಲ್ಲಿದೇನೆ. ಇನ್ಸಾ ಅಲ್ಲಾಹ್ ಮುಂದಿನ ೩-೪ ತಿಂಗಳಲ್ಲಿ ಈ ಕಾರ್ಯ ಪೂರ್ತಿಯಾಗಬಹುದೆಂದು ಭಾವಿಸುತ್ತೇನೆ.

ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಬ್ಯಾರಿ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಇದು ಕಾರ್ಯರೂಪಕ್ಕೆ ಬಂದಲ್ಲಿ ಬ್ಯಾರಿ ಗತವೈಭವವನ್ನು ಮುಂದಿನ ಪೀಳಿಗೆಗೆ ಅಧ್ಯಯನ ಮಾಡಲು ಅನುಕೂಲವಾಗುತ್ತದೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ಯಾರಿ ಭಾಷೆಗೆ ಮಾನ್ಯತೆ ಲಭಿಸಲು ಸಹಕಾರಿಯಾಗುತ್ತದೆ. ವಿಶ್ವದ ವಿವಿಧ ಬ್ಯಾರಿ ಸಂಘಟನೆಗಳ ಮುಖ್ಯಸ್ಥರನ್ನು ಒಂದೆಡೆ ಸೇರಿಸಿ ವಿಶ್ವ ಬ್ಯಾರಿ ಸಮ್ಮೇಳನವನ್ನು ನಡೆಸುವ ಚಿಂತನೆ ಅಕಾಡೆಮಿಯಿಂದ ನಡೆದಿದೆ. ಇದಕ್ಕಾಗಿ ಇಲಾಖೆಯಿಂದ ಅನುಮತಿಯನ್ನು ಕೇಳಿ ಪತ್ರವನ್ನು ಬರೆಯಲಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ನಡುವೆಯೂ ಅಕಾಡೆಮಿಯ ಕೆಲಸ ಸುಸೂತ್ರವಾಗಿ ನಡೆಸಲು ಸತತ ಪ್ರಯತ್ನ ನಡೆಸುತ್ತಿದ್ದೇನೆ.

ಅಕಾಡೆಮಿಯ ವಿವಿಧ ಕಾರ್ಯಕ್ರಮಗಳಲ್ಲಿ ಸಚಿವರಾದ ಶ್ರೀ ಸಿ.ಟಿ. ರವಿ, ಶ್ರೀ ಎ.ರಾಮದಾಸ್, ಶಾಸಕರುಗಳಾದ ಶ್ರೀ ರಮಾನಾಥ ರೈ, ಶ್ರೀ ಕೃಷ್ಣ ಜೆ. ಪಾಲೆಮಾರ್, ಶ್ರೀ ಎನ್.ಎ. ಯೋಗೀಶ್ ಭಟ್, ಜನಾಬ್ ಯು.ಟಿ. ಖಾದರ್, ಶ್ರೀ ಅಭಯಚಂದ್ರ ಜೈನ್, ಶ್ರೀ ಮುಖ್ಯಮಂತ್ರಿ ಚಂದ್ರು, ಜನಾಬ್ ಎನ್.ಎ. ಹ್ಯಾರಿಸ್, ಶ್ರೀ ಹೆಚ್.ಕೆ. ಕುಮಾರಸ್ವಾಮಿ ಮುಂತಾದ ಹಲವಾರು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದ್ದಾರೆ.

ಸಾರ್ವಜನಿಕ ಅಥವಾ ಸರ್ಕಾರಿ ಕಾರ್ಯಕ್ರಮಗಳ ವೇದಿಕೆ ಎಂದರೆ ದೂರ ಸಾಗುವ ಗೌರವಾನ್ವಿತ ಅಲ್ ಫಝಲ್ ಕೋಯಮ್ಮ ಕೂರತ್ ತಂYಳ್, ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ, ಕೆ.ಕೆ. ಸುಲೈಮಾನ್ ಫೈಝಿ, ಮೌಲಾನಾ ಶಾಪಿ ಸಅದಿ, ಮಾಣಿ ಉಸ್ತಾದ್ ಮುಂತಾದವರು ಅಕಾಡೆಮಿಯ ವೇದಿಕೆಯಲ್ಲಿ ಭಾಗವಹಿಸಿ ನಮಗಾಗಿ ದುಆ ಆಶೀರ್ವಾದ ನೀಡಿರುವ ಆ ಕ್ಷಣ ನನ್ನ ಪಾಲಿಗೆ ಮುಖ್ಯ ಎಂದೆನಿಸಿದೆ. ಭೇದ ಭಾವ ತೋರದೆ ಮುಸ್ಲಿಂ ಸಮಾಜದ ವಿವಿಧ ಪಂಗಡಕ್ಕೆ ಸೇರಿದ ಆಲಿಮ್ ಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಆಶೀರ್ವಾದ ಪಡೆದಿದ್ದೇನೆ.

ನನ್ನ ಬಗ್ಗೆ ಕಳೆದ ಕೆಲವು ತಿಂಗಳ ಹಿಂದೆ ನಡೆದ ಅಪಪ್ರಚಾರದಿಂದಾಗಿ ನನ್ನ ಮೇಲೆ ಮಾರಣಾಂತಿಕವಾದ ಹಲ್ಲೆ ನಡೆಯಿತು. ಕೊಲ್ಲುವವನಿಗಿಂತ ಆಯುಷ್ಯ ನೀಡಿದ ಅಲ್ಲಾಹನ ಕಲ್ಪನೆಯೇ ಬೇರೆಯಾಗಿತ್ತು. ಇದು ಅಲ್ಲಾಹನು ನನಗೆ ನೀಡಿದ ಮರುಜನ್ಮ ಎಂದು ಬಗೆಯುತ್ತೇನೆ. ಕಳೆದ ಕೆಲವು ತಿಂಗಳಿಂದ ಎಲ್ಲಾ ವಿವಾದಗಳಿಂದ ದೂರವಾಗಿದ್ದೇನೆ. ಪ್ರಾಮಾಣಿಕವಾಗಿ ಸಮುದಾಯದ ಸೇವೆಯನ್ನು ಮಾಡುತ್ತಿದ್ದೇನೆ. ನನ್ನನ್ನು ದ್ವೇಷಿಸುತ್ತಿದ್ದವರು ಪ್ರೀತಿಸಲು ಆರಂಭಿಸಿದ್ದಾರೆ. ಇದಕ್ಕೆಲ್ಲಾ ಕಾರಣ ಕರ್ತರಾದ ಸೃಷ್ಟಿಕರ್ತನನ್ನು ಸಾವಿರಾರು ಬಾರಿ ಸ್ತುತಿಸುತ್ತೇನೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸಮಸ್ತ ಬ್ಯಾರಿ ಬಾಂಧವರ ಸೊತ್ತು. ಇದರಲ್ಲಿ ಅಧ್ಯಕ್ಷ ಸ್ಥಾನವೆಂಬುದು ನೆಪಮಾತ್ರ. ಸಮಸ್ತ ಬ್ಯಾರಿಗಳು ಸಲಹೆ ಸೂಚನೆ ಪತ್ರಗಳನ್ನು ಬರೆದು ನಮ್ಮ ಸರಿ ತಪ್ಪುಗಳನ್ನು ತಿಳಿಸಬೇಕು ಹಾಗೂ ನಮಗೆ ಮಾರ್ಗದರ್ಶನ ನೀಡಬೇಕು. ನನ ದೀರ್ಘಾಯುಷ್ಯಕ್ಕಾಗಿ ತಾವು ದುಆ ಮಾಡಬೇಕೆಂದು ಸಮಸ್ತ ಬ್ಯಾರಿಗಳಲ್ಲಿ ಮನವಿ ಮಾಡುತ್ತಾ ಸದಾ ನಿಮ್ಮವನಾಗಿ ಇರುತ್ತೇನೆ ಎಂಬ ಆಸಯವನ್ನು ವ್ಯಕ್ತಪಡಿಸುತ್ತಾ.

ನಿಮ್ಮ ಪ್ರೀತಿಯ ಸಹೋದರ
ರಹೀಂ ಉಚ್ಚಿಲ್

 

ಮಾಜಿ ಅಧ್ಯಕ್ಷರ ಮಾತು

 

ಕರ್ನಾಟಕ ಕರಾವಳಿ ಬ್ಯಾರಿಗಳ ಉಗಮ ಸ್ಥಾನ. ಮಂಗಳೂರು ಬ್ಯಾರಿಗಳ ರಾಜಧಾನಿ. ಇಂದು ಜಗತ್ತಿನಾದ್ಯಂತ ಸುಮಾರು 15 ಲಕ್ಷಕ್ಕೂ ಮಿಕ್ಕಿ ಬ್ಯಾರಿಗಳಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. ಉದ್ಯೋಗ, ವ್ಯಾಪಾರ, ಉದ್ಯಮ ಅರಸಿಕೊಂಡು ಹೋಗಿ ಅಲ್ಲಿಯೇ ನೆಲೆಸಿರುವ ಬಹಳಷ್ಟು ಬ್ಯಾರಿಗಳು ಇಂದು ರಾಜ್ಯ, ದೇಶದ ಮೂಲೆ ಮೂಲೆಗಳಲ್ಲೂ ಇದ್ದಾರೆ. ವಿದೇಶಗಳಲ್ಲೂ ಬಹುಸಂಖ್ಯೆಯಲ್ಲಿದ್ದಾರೆ. ಆದರೂ ಅವರು ತಮ್ಮ ತಾಯ್ನೆಲವನ್ನು ಮರೆತಿಲ್ಲ. ಬ್ಯಾರಿಗಳ ಮುಖ್ಯ ಕಸುಬು ವ್ಯಾಪಾರ. ಹೆಚ್ಚಾಗಿ ಗಂಡಸರೇ ದುಡಿಯುತ್ತಾರೆ. ಹೆಂಗಸರು ಮನೆವಾರ್ತೆ ನೋಡಿಕೊಳ್ಳುತ್ತಾರೆ. ಅವರು ದುಡಿಯಲು ಹೋಗುವುದು ವಿರಳ.

ಸುಮಾರು 20 ವರ್ಷಗಳ ಹಿಂದಿನ ಮಾತು. ಕರ್ನಾಟಕ ಕರಾವಳಿಯಿಂದ ಉದ್ಯೋಗ, ವ್ಯಾಪಾರಕ್ಕೆಂದು ಬೆಂಗಳೂರು ಸೇರಿದ ಬ್ಯಾರಿಗಳು ಅಲ್ಲಿಯೇ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಎಂಬ ಸಂಸ್ಥೆಯೊಂದನ್ನು ಕಟ್ಟಿಕೊಂಡರು. ಬ್ಯಾರಿಗಳ ಸರ್ವತೋಮುಖ ಅಭಿವೃದ್ಧಿಗೆ ದುಡಿಯುವುದು ಈ ಸಂಸ್ಥೆಯ ಉದ್ದೇಶವಾಗಿತ್ತು. 1997ರಲ್ಲಿ ಈ ಸಂಸ್ಥೆಯ ವತಿಯಿಂದ ಬೆಂಗಳೂರು ಅರಮನೆ ಮೈದಾನದಲ್ಲಿ 2 ದಿನಗಳ ‘ಬ್ಯಾರಿ ಸಮ್ಮೇಳನ’ವನ್ನು ಹಮ್ಮಿಕೊಳ್ಳಲಾಯಿತು. ಬಹಳ ವಿಜೃಂಭನೆಯಿಂದ ನಡೆದ ಈ ಸಮ್ಮೇಳನವು ಸಂಪೂರ್ಣ ಯಶಸ್ವಿಯಾಯಿತು. ಮಾತ್ರವಲ್ಲ ಈ ಸಮ್ಮೇಳನವೇ ಬ್ಯಾರಿ ಆಂದೋಲನಕ್ಕೆ ನಾಂದಿಯಾಯಿತು.

ಬೆಂಗಳೂರು ಸಮ್ಮೇಳನದಲ್ಲಿ ಭಾಗವಹಿಸಿದ ಮಂಗಳೂರಿನ ಕೆಲವು ಕವಿಗಳು, ಸಾಹಿತಿಗಳು ಹಾಗೂ ಕಲಾವಿದರು `ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ’ ಎಂಬ ಸಂಸ್ಥೆಯೊಂದನ್ನು ಮಂಗಳೂರಿನಲ್ಲಿ ಹುಟ್ಟು ಹಾಕಿದರು. ಆ ಸಂಘದ ಮೂಲಕ ಬ್ಯಾರಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಾ ರಾಜ್ಯದ ಮೂಲೆ - ಮೂಲೆ ಸಂಚರಿಸಿದರು. ಬ್ಯಾರಿಗಳನ್ನು ಸಾಂಸ್ಕೃತಿಕವಾಗಿ ಸಂಘಟಿಸಿದರು. 1998ರಲ್ಲಿ ಮಂಗಳೂರು ಪುರಭವನದಲ್ಲಿ ’ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನ’ವನ್ನು ನಡೆಸಿದರು. ಈ ಐತಿಹಾಸಿಕ ಸಮ್ಮೇಳನ ಬ್ಯಾರಿಗಳ ಸ್ವಾಭಿಮಾನವನ್ನು ಬಡಿದೆಬ್ಬಿಸಿತು. ಬ್ಯಾರಿ ಎಂದು ಗುರುತಿಸಿಕೊಳ್ಳಲು ನಾಚಿಕೆ ಪಟ್ಟುಕೊಳ್ಳುತ್ತಿದ್ದ ಬ್ಯಾರಿಗಳು ಅಂದಿನಿಂದ ’ನಾನು ಬ್ಯಾರಿ’ ಎಂದು ಹೆಮ್ಮೆಯಿಂದ ಹೇಳತೊಡಗಿದರು. ಈ ಸಮ್ಮೇಳನದ ಸ್ವಾಗತ ಸಮಿತಿಯನ್ನೇ `ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್’ ಎಂದು ನಾಮಕರಣ ಮಾಡಿ ಹೊಸ ಸಂಘಟನೆಯೊಂದನ್ನು ಸ್ಥಾಪಿಸಿ ಆ ಮೂಲಕ ಬಂಟ್ವಾಳದಲ್ಲಿ ಎರಡನೇ ಬ್ಯಾರಿ ಸಾಹಿತ್ಯ ಸಮ್ಮೇಳನ, ಉಡುಪಿಯಲ್ಲಿ ಮೂರನೇ ಸಾಹಿತ್ಯ ಸಮ್ಮೇಳನ ಹಾಗೂ ಚಿಕ್ಕಮಗಳೂರಿನಲ್ಲಿ ಅಲ್ಲಿಯ ಬ್ಯಾರಿಗಳ ಒಕ್ಕೂಟದ ಸಹಯೋಗದೊಂದಿಗೆ ನಾಲ್ಕನೇ ಬ್ಯಾರಿ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲಾಯಿತು. ಪ್ರತಿಯೊಂದು ಸಮ್ಮೇಳನದಲ್ಲಿಯೂ ಸರಕಾರದೊಂದಿಗೆ ಬ್ಯಾರಿಗಳ ಮುಖ್ಯ ಬೇಡಿಕೆ `ಬ್ಯಾರಿಗಳಿಗೊಂದು ಸಾಹಿತ್ಯ ಅಕಾಡೆಮಿ ಕೊಡಿ’ ಎಂಬುದಾಗಿತ್ತು. 12 ವರ್ಷಗಳ ಸತತ ಹೋರಾಟದ ಫಲವಾಗಿ ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನದಲ್ಲಿ ಕುಮಾರಸ್ವಾಮಿ ನೇತೃತ್ವದ ಅಂದಿನ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಬ್ಯಾರಿಗಳಿಗೆ ’ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ’ಯನ್ನು ಘೋಷಿಸಿತು. ನಂತರ ಬಂದ ಯಡಿಯೂರಪ್ಪ ಸರಕಾರ ಫೆಬ್ರವರಿ 5, 2009 ರಂದು ಅಧ್ಯಕ್ಷರು ಮತ್ತು ಸರ್ವ ಸದಸ್ಯರನ್ನು ನೇಮಿಸಿ ಅಕಾಡೆಮಿಗೆ ಚಾಲನೆ ನೀಡಿತು.

ಪ್ರಾರಂಭದಲ್ಲಿ ಅಕಾಡೆಮಿಗೆ ಕಚೇರಿ ಇರಲಿಲ್ಲ. ಸಿಬ್ಬಂದಿಗಳಿರಲಿಲ್ಲ. ಕೆಲವು ತಿಂಗಳು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಚಾವಡಿಯಲ್ಲಿ ಒಂದು ಕುರ್ಚಿ ಹಾಗೂ ಮೇಜು ಇಟ್ಟು ಕಾರ್ಯ ನಿರ್ವಹಿಸಿದ ಅಕಾಡೆಮಿ 6 ತಿಂಗಳೊಳಗೆ ಅಕಾಡೆಮಿಗೆ ಸ್ವಂತ ಕಚೇರಿಯನ್ನು ಸ್ಥಾಪಿಸಿ, ಸಿಬ್ಬಂದಿಗಳನ್ನು ನೇಮಿಸಿಕೊಂಡಿತು. ಅನಂತರ ಕಾರ್ಯಕ್ರಮ ಹಮ್ಮಿಕೊಳ್ಳ ತೊಡಗಿದ ಅಕಾಡೆಮಿ ಮತ್ತೆ ಹಿಂದಿರುಗಿ ನೋಡಲಿಲ್ಲ. ನಗರ, ಹಳ್ಳಿಗಳಲ್ಲದೆ ಬೆಂಗಳೂರು, ಮುಂಬೈಯಂತಹ ಮಹಾನಗರಗಳಲ್ಲೂ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿತು. ಮೈಸೂರು, ಗೋವಾ ಮಾತ್ರವಲ್ಲ ಎಲ್ಲೆಲ್ಲಿ ಬ್ಯಾರಿಗಳು ನೆಲೆಸಿದ್ದಾರೊ ಅಲ್ಲೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದೆ. ಒಂದು ವರ್ಷ ಬ್ಯಾರಿಗಳನ್ನು ಸಾಂಸ್ಕೃತಿಕವಾಗಿ ಸಂಘಟಿಸುವುದರಲ್ಲಿಯೇ ಕಳೆದ ಅಕಾಡೆಮಿ ಈಗ ಸಾಹಿತ್ಯದತ್ತ ದೃಷ್ಟಿನೆಟ್ಟಿದೆ. ಈ ವರ್ಷಾಂತ್ಯದೊಳಗೆ ಕನಿಷ್ಠ 10 ಬ್ಯಾರಿ ಕೃತಿಗಳನ್ನಾದರೂ ಪ್ರಕಟಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಈಗಾಗಲೇ ಪ್ರಕಟಣೆಗಾಗಿ ಅಕಾಡೆಮಿಗೆ ಹಲವಾರು ಹಸ್ತಪ್ರತಿಗಳು ಬಂದಿದ್ದು, ಈ ಬಗ್ಗೆ ಪರಿಶೀಲಿಸಲಾಗುತ್ತಿದೆ.

ಕಳೆದ ಒಂದು ವರ್ಷದಲ್ಲಿ ಅಕಾಡೆಮಿ ಸುಮಾರು 20 ರಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. ಈ ಯಶಸ್ವಿಗೆ ಸಮಸ್ತ ಬ್ಯಾರಿ ಸಮುದಾಯದ ಸಂಪೂರ್ಣ ಸಹಕಾರ ಹಾಗೂ ರಿಜಿಸ್ಟ್ರಾರ್ ಮತ್ತು ಸರ್ವ ಸದಸ್ಯರ ಅವಿಶ್ರಿತ ಶ್ರಮವೇ ಕಾರಣ. ನಮ್ಮ ಕಾರ್ಯಕ್ರಮವನ್ನು ಕಂಡು ದ.ಕ. ಜಿಲ್ಲಾ ಉಸ್ತುವರಿ ಸಚಿವ ಶ್ರೀ ಕೃಷ್ಣ ಜೆ. ಪಾಲೆಮಾರ್ ಮಂಗಳೂರು ಪುರಭವನದಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಹೇಳಿದ ಮಾತನ್ನು ಇಲ್ಲಿ ಉಲ್ಲೇಖಿಸಲು ಇಷ್ಟ ಪಡುತ್ತೇನೆ. ``ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಬಹಳ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇವರು ನಡೆಸುವ ಕಾರ್ಯಕ್ರಮಕ್ಕೆ ಬಹಳಷ್ಟು ಜನ ಸೇರುತ್ತಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಬೇರೆಲ್ಲ ಅಕಾಡೆಮಿಗೆ ಮಾದರಿಯಾಗಿದೆ.’' ಬ್ಯಾರಿ ಸಮುದಾಯವನ್ನು ಸಾಹಿತ್ಯವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಪಥದತ್ತ ಸಾಗಿಸಲು, ಬ್ಯಾರಿ ಭಾಷೆಯನ್ನು ಉಳಿಸಿ ಬೆಳೆಸಲು ಸರಕಾರ ನಮಗೆ ಈ ಅಕಾಡೆಮಿಯನ್ನು ನೀಡಿದೆ. ಇದರ ಸಂಪೂರ್ಣ ಪ್ರಯೋಜನವನ್ನು ಸಮುದಾಯಕ್ಕೆ ಮುಟ್ಟಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಹಾಗೆಯೇ ಇದನ್ನು ಪಡೆಯಲು ಸಮುದಾಯ ಕೂಡಾ ಮುಂದೆ ಬರಬೇಕಿದೆ.

ಎಂ ಬಿ ಅಬ್ದುಲ್ ರಹಿಮಾನ್

 

ಕರಂಬಾರು ಮಹಮ್ಮದ್

2007-2009  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ

 

ಕರ್ನಾಟಕ ಕರಾವಳಿ ಪ್ರದೇಶದ ಮಂಗಳೂರು, ಉಡುಪಿ ಜಿಲ್ಲೆಗಳಲ್ಲದೆ ನೆರೆಯ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಬೆಂಗಳೂರು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಅತ್ಯಧಿಕ ಬ್ಯಾರಿ ಸಮುದಾಯದವರು ವಾಸವಾಗಿದ್ದಾರೆ. ಅಲ್ಲದೆ ಇತರೆ ಜಿಲ್ಲೆಗಳಲ್ಲೂ ಹಾಗೂ ನೆರೆ ರಾಜ್ಯವಾದ ಕೇರಳದ ಕಾಸರಗೋಡು ಜಿಲ್ಲೆಯಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಬ್ಯಾರಿಗಳು ವಾಸವಾಗಿದ್ದಾರೆ. ಹೊರ ರಾಜ್ಯದ ಗೋವಾ, ಮುಂಬೈಯಲ್ಲದೆ ವಿದೇಶಗಳಲ್ಲೂ ಹಲವಾರು ಬ್ಯಾರಿಗಳು ಉದ್ಯೋಗಗಳಲ್ಲಿದ್ದಾರೆ. ಅದರಲ್ಲೂ ವಿಶೇಷವಾಗಿ ಸೌದಿ ಅರೇಬಿಯಾ, ಯು.ಎ.ಇ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಅಧಿಕ ಸಂಖ್ಯೆಯ ಬ್ಯಾರಿಗಳು ಉದ್ಯೋಗಗಳಲ್ಲಿದ್ದು, ಅವರ ಬಹಳಷ್ಟು ಜನರ ಕುಟುಂಬಗಳೂ ಅಲ್ಲೇ ನೆಲೆಸಿವೆ. ಆದರೂ ಅವರೆಲ್ಲರೂ ಬ್ಯಾರಿ ಭಾಷೆಯ ಬಗ್ಗೆ ಅಭಿಮಾನವನ್ನಿಟ್ಟುಕೊಂಡು ಹಲವಾರು ಸಂಘಟನೆಗಳನ್ನು ಸ್ಥಾಪಿಸಿ, ಆ ಸಂಘಟನೆಗಳ ಮೂಲಕ ಬ್ಯಾರಿ ಭಾಷೆ, ಕಲೆ ಸಾಹಿತ್ಯವನ್ನು ಪ್ರೋತ್ಸಾಹಿಸುತ್ತಾ ಇದ್ದಾರೆ. ಆದರೆ ಬ್ಯಾರಿಗಳಿಗೆ ಒಂದು ಸಂಘಟನೆ ಇರಲಿಲ್ಲ. 1987 ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದಂತಹ ಬ್ಯಾರಿ ಸಮುದಾಯದ ಪ್ರಮುಖರು ಹಲವರು ಸೇರಿ “ಬ್ಯಾರಿ ವೆಲ್ಫೇರ್‍ ಅಸೋಸಿಯೇಷನ್” ಎಂಬ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಬ್ಯಾರಿಗಳ ಸಂಘಟನೆಗೆ ಒಂದು ವೇದಿಕೆಯನ್ನು ನಿರ್ಮಿಸಿದರು. ಈ ಸಂಘಟನೆಯಡಿಯಲ್ಲಿ ಅದರ ಪದಾಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆಯೂ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿನ ಬ್ಯಾರಿ ಸಮುದಾಯದ ಪ್ರಮುಖರ ಸಭೆ ನಡೆಸಿ, ಬ್ಯಾರಿ ಸಂಘಟನೆಯ ಮಹತ್ವವನ್ನು ಮನವರಿಕೆ ಮಾಡಿಸಿದ್ದೇ ಅಲ್ಲದೆ, ಸಂಘಟನೆಯ 10 ನೇ ವಾರ್ಷಿಕೋತ್ಸವದ ಅಂಗವಾಗಿ 1997 ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 2 ದಿನಗಳ ಬ್ಯಾರಿ ಸಮ್ಮೇಳನವನ್ನು ನಡೆಸುವುದರ ಮೂಲಕ ಇಡೀ ರಾಜ್ಯದ ಬ್ಯಾರಿಗಳನ್ನು ಒಂದೆಡೆ ಕಲೆ ಹಾಕುವುದರಲ್ಲಿ ಹಾಗೂ ಅವರಲ್ಲಿ ಬ್ಯಾರಿ ಭಾಷೆಯ, ಸಂಸ್ಕ್ರತಿಯ ಹಾಗೂ ಕಲೆಯ ಬಗ್ಗೆ ಜಾಗ್ರತಿ ಮೂಡಿಸುವುದರಲ್ಲಿ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನಡೆಯಿತು.

2004 ನೇ ಇಸವಿಯಲ್ಲಿ ನಾನು ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಒಂದು ದಿನ ಯಾವುದೋ ಕೆಲಸದ ನಿಮಿತ್ತ ಚಿಕ್ಕಮಗಳೂರಿನ ನಮ್ಮ ಮನೆಗೆ ಬಂದಿದ್ದ ಬ್ಯಾರಿ ಸಾಹಿತಿ ಮಹಮ್ಮದ್ ಬಡ್ಡೂರ್‍ ರವರು ನನ್ನೊಂದಿಗೆ ಲೋಕಾಭಿರಾಮನಾಗಿ ಮಾತನಾಡುತ್ತಾ ದ.ಕ. ಬಿಟ್ಟರೆ ಅತ್ಯಧಿಕ ಸಂಖ್ಯೆಯಲ್ಲಿ ಬ್ಯಾರಿಗಳಿರುವ ಚಿಕ್ಕಮಗಳೂರಿನಲ್ಲೆಕೆ ಒಂದು ಬ್ಯಾರಿಗಳ ಸಂಘಟನೆಯನ್ನು ಮಾಡಬಾರದು ? ಎಂಬ ಪ್ರಸ್ತಾಪವನ್ನಿಟ್ಟಾಗ, ನನಗೂ ಇದು ಒಳ್ಳೆಯ ಸಲಹೆ ಎಂದೆನ್ನಿಸಿ, ಆ ನಿಟ್ಟಿನಲ್ಲಿ ನಮ್ಮ ಜಿಲ್ಲೆಯ ಬೇರೆ ಬೇರೆ ತಾಲೂಕಿನ ಸ್ನೇಹಿತರನ್ನು ಮತ್ತು ಸಮಾಜದ ಧುರೀಣರನ್ನು ಸಂಪರ್ಕಿಸಿ ಚರ್ಚಿಸಿದಾಗ ಎಲ್ಲರಿಂದಲೂ ಸಕಾರಾತ್ಮಕವಾದ ಸ್ಪಂದನೆ ಸಿಕ್ಕಿದ್ದರಿಂದ ಎಲ್ಲರನ್ನು ಒಗ್ಗೂಡಿಸಿ 20-04-2005 ರಂದು ಚಿಕ್ಕಮಗಳೂರಿನ DCC ಬ್ಯಾಂಕ್ ಸಭಾಂಗಣದಲ್ಲಿ ಒಂದು ಪೂರ್ವ ಭಾವಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಮಂಗಳೂರಿನ ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತಿನ ಅಂದಿನ ಅಧ್ಯಕ್ಷರಾದ M.B ಅಬ್ದುಲ್ ರಹ್ಮಾನ್, ಮಹಮ್ಮದ್ ಬಡ್ಡೂರ್‍, ಪದಾಧಿಕಾರಿಗಳಾದ B.A ಮಹಮ್ಮದ್ ಅಲಿ, ಬಶೀರ್‍ ಬೈಕಂಪಾಡಿ, ಉಮರ್‍ ಯು.ಹೆಚ್, ಹುಸೈನ್ ಕಾಟಿಪಳ್ಳ, ಹಾಗೂ ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತಿನ ಇತರೆ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಪ್ರಮುಖ ಬ್ಯಾರಿ ಧುರೀಣರು ಭಾಗವಹಿಸಿದ್ದರು. ಈ ಸಭೆಯಲ್ಲಿ “ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟ” ಎಂಬ ಹೆಸರಿನಲ್ಲಿ ಒಂದು ಸಂಘಟನೆಯನ್ನು ಪ್ರಾರಂಭಿಸಿ, ಆ ಒಕ್ಕೂಟಕ್ಕೆ ಎಲ್ಲರೂ ಸೇರಿ ನನ್ನನ್ನೇ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರು. ಹಾಗೂ ಎಲ್ಲಾ 7 ತಾಲೂಕುಗಳಿಂದಲೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಇದೇ ಸಭೆಯಲ್ಲಿ ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ವತಿಯಿಂದ 4 ನೇ ಬ್ಯಾರಿ ಸಾಹಿತ್ಯ ಸಮ್ಮೇಳನವನ್ನು ಚಿಕ್ಕಮಗಳೂರಿನಲ್ಲಿ ನಡೆಸಲು ಜಿಲ್ಲಾ ಬ್ಯಾರಿ ಒಕ್ಕೂಟದವರು ಸಹಯೋಗ ನೀಡುವುದಾದರೆ ಚಿಕ್ಕಮಗಳೂರಿನಲ್ಲಿ 4 ನೇ ಬ್ಯಾರಿ ಸಾಹಿತ್ಯ ಸಮ್ಮೇಳನವನ್ನು ನಡೆಸೋಣ ಎಂಬ ಪ್ರಸ್ತಾಪವನ್ನು ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತಿನವರು ಇಟ್ಟಾಗ ಅದಕ್ಕೆ ಸಂಪೂರ್ಣ ಸಹಕಾರ ನೀಡಿ, ಯಶಸ್ವಿ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಸರ್ವಾನುಮತದ ನಿರ್ಣಯವನ್ನು, ಇದೇ ಸಭೆಯಲ್ಲಿ ಕೈಗೊಳ್ಳಲಾಯಿತು.

ಅದರಂತೆ ಜಿಲ್ಲಾ ಬ್ಯಾರಿ ಒಕ್ಕೂಟದ ಪದಾಧಿಕಾರಿಗಳು ಜಿಲ್ಲೆಯ ಏಳು ತಾಲೂಕುಗಳಿಗೆ ಭೇಟಿ ನೀಡಿ ಅಲ್ಲಿನ ಬ್ಯಾರಿ ಪ್ರಮುಖರನ್ನು ಸೇರಿಸಿ ಸಭೆ ನಡೆಸಿ, ಒಟ್ಟು 9 ಬ್ಲಾಕ್ ಬ್ಯಾರಿ ಒಕ್ಕೂಟಗಳನ್ನು ರಚನೆ ಮಾಡಿ, ಬ್ಯಾರಿಗಳ ಸಂಘಟನೆಯ ಬಗ್ಗೆ ಅವರಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಮುಂದೆ ಚಿಕ್ಕಮಗಳೂರಿನಲ್ಲಿ ನಡೆಯಲಿರುವ 4ನೇ ಬ್ಯಾರಿ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕಾರ ನೀಡಬೇಕೆಂದು ಕೋರಿದಾಗ ಎಲ್ಲೆಡೆಯಿಂದಲೂ ಉತ್ತಮ ಪ್ರೋತ್ಸಾಹಕರವಾದ ಸ್ಪಂದನೆ ದೊರೆಯಿತು. ಅಂತಿಮವಾಗಿ ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಸಹಯೋಗದೊಂದಿಗೆ ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ದಿನಾಂಕ 27-02-2007 ರಂದು 4 ಬ್ಯಾರಿ ಸಾಹಿತ್ಯ ಸಮ್ಮೇಳನವನ್ನು ನೆರವೇರಿಸಿದ್ದು. ಈ ಸಮ್ಮೇಳನಕ್ಕೆ ಜಿಲ್ಲಾದ್ಯಂತದ ಬ್ಯಾರಿಗಳಲ್ಲದೆ ನೆರೆಜಿಲ್ಲೆಗಳಿಂದಲೂ ಸಹಸ್ರಾರು ಬ್ಯಾರಿಗಳು ಆಗಮಿಸಿ ಇದೊಂದು ಐತಿಹಾಸಿಕ ಸಮ್ಮೇಳನವಾಗಿ ಅತ್ಯಂತ ವಿಜ್ರಂಭಣೆಯಿಂದ ನೆರವೇರಿತು, ಇದೇ ಸಮ್ಮೇಳನದಲ್ಲಿ ಬ್ಯಾರಿ ಸಮುದಾಯದ ಬಹುವರ್ಷಗಳ ಬೇಡಿಕೆಯಾದ ಬ್ಯಾರಿ ಸಾಹಿತ್ಯ ಅಕಾಡೆಮಿಯ ಘೋಷಣೆಯಾಯಿತು. ಈ ಸಂದರ್ಭದಲ್ಲಿ ನಮ್ಮ ಬಹಳ ವರ್ಷಗಳ ಬೇಡಿಕೆಯನ್ನು ಮನ್ನಿಸಿ, ಅಕಾಡೆಮಿಯನ್ನು ಮಂಜೂರು ಮಾಡಿದ ಅಂದಿನ ಮುಖ್ಯಮಂತ್ರಿ ಶ್ರೀ.ಹೆಚ್.ಡಿ.ಕುಮಾರಸ್ವಾಮಿಯವರನ್ನು, ಅಂದಿನ ಕನ್ನಡ ಮತ್ತು ಸಂಸ್ಕ್ರತಿ ಸಚಿವರಾದ ದಿ|| ಶ್ರೀ.H.S.ಮಹದೇವಪ್ರಸಾದರವರನ್ನು ಹಾಗೂ ಇದರ ಹಿಂದೆ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿದ ವಿಧಾನ ಪರಿಷತ್ ಸದಸ್ಯರಾದ ಶ್ರೀ,ಎಸ್.ಎಲ್.ಭೋಜೇಗೌಡರವರನ್ನು ಹಾಗೂ ಇದಕ್ಕಾಗಿ ಬಹಳ ವರ್ಷಗಳಿಂದ ಹೋರಾಟ ಮಾಡಿದ ಬ್ಯಾರೀಸ್ ವೆಲ್ಫೇರ್‍ ಎಸೋಸಿಯೇಷನ್, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತು, ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟ ಇವೆಲ್ಲದರ ಪದಾಧಿಕಾರಿಗಳನ್ನು ನಾವು ಸ್ಮರಿಸಬೇಕಾಗಿದೆ.

ಅಕಾಡೆಮಿ ಸಿಕ್ಕಿದ ನಂತರ ಬ್ಯಾರಿ ಭಾಷೆ, ಸಂಸ್ಕ್ರತಿ ಮತ್ತು ಸಾಹಿತ್ಯದ ಅಭಿವ್ರಧ್ಧಿಗಾಗಿ ಕಳೆದ 12 ವರ್ಷಗಳಿಂದ ಬಂದ ಎಲ್ಲಾ ಅಧ್ಯಕ್ಷರುಗಳು ಮತ್ತು ಸದಸ್ಯರುಗಳು ಶ್ರಮಿಸಿ ಬೇರೆಲ್ಲಾ ಭಾಷಾ ಅಕಾಡೆಮಿಗಳಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಈ ಅವಧಿಯಲ್ಲಿ ಬ್ಯಾರಿನಿಘುಂಟು, ಬ್ಯಾರಿ ವ್ಯಾಕರಣ ಸಿಧ್ಧಪಡಿಸಿ ಬಿಡುಗಡೆಗೊಂಡಿದ್ದು ಈಗ ಬ್ಯಾರಿ ಲಿಪಿಯೂ ಸಿಧ್ಧವಾಗಿರುತ್ತದೆ. ಅಲ್ಲದೆ ನಮ್ಮ ಬೇಡಿಕೆಯಾಗಿದ್ದ ಮಂಗಳೂರು ವಿ.ವಿ.ಯಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆಗೆ ಸರ್ಕಾರ ಆದೇಶ ನೀಡಿ ಕಾರ್ಯನಿರ್ವಹಿಸುತ್ತಾ ಇದೆ. ಇನ್ನು ಶಾಲಾ ಪಠ್ಯಪುಸ್ತಕದಲ್ಲಿ ಬ್ಯಾರಿ ಭಾಷೆಗೂ ಅವಕಾಶ ನೀಡಬೇಕೆಂಬ ಹಾಗೂ ಮಂಗಳೂರು ಆಕಾಶವಾಣಿಯಲ್ಲಿ ಬ್ಯಾರಿ  ಭಾಷೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂಬ ನಮ್ಮ ಬೇಡಿಕೆ ಹಾಗೆಯೇ ಬಾಕಿ ಉಳಿದಿದೆ. ಅದರ ಈಡೇರಿಕೆಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ. ಬ್ಯಾರಿ ಭಾಷೆಯಲ್ಲಿ ಬರೆಯಲು ಆಸಕ್ತಿಯುಳ್ಳ ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ನೀಡುವುದು, ಶಾಲೆ-ಮದರಸಗಳಲ್ಲಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಬ್ಯಾರಿ ಭಾಷೆಯ ಬಳಕೆಯ ಬಗ್ಗೆ ಜಾಗ್ರತಿಯನ್ನುಂಟುಮಾಡುವುದು, ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಬ್ಯಾರಿ ಮಹಿಳೆಯರನ್ನು ಸೇರಿಸಿ, ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡುವುದು. ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಅದು ಇನ್ನೂ ಹೆಚ್ಚಾಗಿ ನಡೆಯಬೇಕಾಗಿದೆ. ಇತ್ತೀಚೆಗೆ ಕತೆ, ಕವನ ರಚಿಸಿ ಪ್ರಕಟಿಸುವುದರಲ್ಲಿ ಹಾಗೂ ಬ್ಯಾರಿ ಚಟುವಟಿಕೆಗಳಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಕಂಡು ಬರುತ್ತಾ ಇರುವುದು ಆಶಾದಾಯಕ ಬೆಳವಣಿಗೆಯಾಗಿರುತ್ತದೆ. ಅವರಿಗೆ ಎಲ್ಲಾ ರೀತಿಯಲ್ಲಿ ಪ್ರೋತ್ಸಾಹ ನೀಡುವ ಕೆಲಸವಾಗಬೇಕಾಗಿದೆ.

ಮೊದಲು ನಾವು ಬ್ಯಾರಿಗಳಾಗಿ, ನಮ್ಮ ಮನೆಯಲ್ಲಿ ಕುಟುಂಬ, ಮಕ್ಕಳೊಂದಿಗೆ ಬ್ಯಾರಿ ಭಾಷೆಯಲ್ಲಿಯೇ ವ್ಯವಹರಿಸುತ್ತಾ, ಇತರರಲ್ಲೂ ಸಹ ಬ್ಯಾರಿ ಭಾಷೆಯ ಬಗ್ಗೆ ಅಭಿಮಾನ ಬರುವಂತೆ ವರ್ತಿಸುತ್ತಾ ಬ್ಯಾರಿ ಭಾಷೆಯ ಉಳಿವಿಗೆ ಮತ್ತು ಅಭಿವ್ರಧ್ಧಿಗೆ ಎಲ್ಲರೂ ಸೇರಿ ಶ್ರಮಿಸೋಣ. ನಮ್ಮ ಮುಂದಿನ ತಲೆಮಾರುಗಳಿಗೆ ಬ್ಯಾರಿ ಭಾಷೆಯನ್ನು ಉಳಿಸಿ ಹೋಗೋಣವೆಂದು ಎಲ್ಲಾ ಬ್ಯಾರಿ ಬಾಂಧವರಲ್ಲೂ ವಿನಮ್ರವಾಗಿ ವಿನಂತಿಸುತ್ತೇನೆ.

 

 ಕರಂಬಾರು ಮಹಮ್ಮದ್

ರಹೀಂ ಉಚ್ಚಿಲ್- ಅಧ್ಯಕ್ಷರು- 2019 ರಿಂದ 2022

 

ಅಸ್ಸಲಾಂ ಅಲೈಕುಂ. ಎಲ್ಲರಿಗೂ ನಮಸ್ಕಾರ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿ ಒಂದೂವರೆ ವರ್ಷ ಕಳೆದು ಹೋಯಿತು. ಈ ಒಂದೂವರೆ ವರ್ಷದಲ್ಲಿ ಅನೇಕ ಕೆಲಸಗಳನ್ನು, ಸಾಧನೆಗಳನ್ನು ನಾವು ಮಾಡಿದ್ದೇವೆ. ಇದು ನಮ್ಮ ಮನಸ್ಸಿಗೆ ಸಮಾಧಾನ ತಂದಿದೆ. ಸಾವಿರದ ನಾಲ್ಕುನೂರು ಇತಿಹಾಸ ಇರುವಂತಹ ಬ್ಯಾರಿ ಭಾಷೆಗೆ ಸ್ವರಾಕ್ಷರ, ವ್ಯಂಜನಾಕ್ಷರ ಸೇರಿರುವಂತಹ ಬ್ಯಾರಿ ಲಿಪಿಯ ಕ್ಯಾಲೆಂಡರ್ ಸೃಷ್ಟಿ ಮಾಡಿರುವ ಮತ್ತೊಂದು ಖುಷಿ ನಮ್ಮ ಕೂಟಕ್ಕೆ ಇದೆ. ಬೇರೆ ಬೇರೆ ಊರುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದಾಗ ಅಲ್ಲಿನ ನಿವಾಸಿಗಳು ಹಾಗೂ ವಿವಿಧ ಸಂಘಟನೆಗಳು ನೀಡಿರುವಂತಹ ಸಹಾಯ, ಸಹಕಾರವನ್ನು ನಾವು ಮರೆಯಲು ಸಾಧ್ಯವಿಲ್ಲ.

ಬ್ಯಾರಿ ಲಿಪಿಯ ಬಿಡುಗಡೆ ಕಾರ್ಯಕ್ರಮ, ತುಳು ಭವನದಲ್ಲಿ ನಡೆದಂತಹ ಯಕ್ಷಗಾನ ಮತ್ತು ಬ್ಯಾರಿ ಸಂಬಂಧ ಕಾರ್ಯಕ್ರಮ, ಬ್ಯಾರಿ ಭಾಷಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಬ್ದಕೋಶದ ಬಿಡುಗಡೆ, ಬ್ಯಾರಿ ಕನ್ನಡ ಇಂಗ್ಲಿಷ್ ಹಿಂದಿ ರೋಮನ್ ಲಿಪಿ ಶಬ್ದಕೋಶ ಬಿಡುಗಡೆ ಕಾರ್ಯಕ್ರಮ, ಬೆಂಗಳೂರಲ್ಲಿ ನಡೆದಂತಹ ಬ್ಯಾರಿ ಗೌರವ ಪ್ರಶಸ್ತಿ ಕಾರ್ಯಕ್ರಮ, ಮರೆಯಲು ಸಾಧ್ಯವಿಲ್ಲದ ನಿಧನ ಹೊಂದಿದ ಬ್ಯಾರಿ ಸಾಧಕರು ಗ್ರಂಥ ಬಿಡುಗಡೆ ಕಾರ್ಯಕ್ರಮ, ಬ್ಯಾರಿ ಅಕಾಡೆಮಿಯ 2021ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ, ಕಾರವಾರದಲ್ಲಿ ನಡೆದ ಬಹುಭಾಷಾ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ, ವಿಶ್ವ ಬ್ಯಾರಿ ಭಾಷಾ ದಿನಾಚರಣೆ, ದಿವಂಗತ ಬಿಎಂ ಇದಿನಬ್ಬರ ಜನ್ಮಶತಮಾನೋತ್ಸವ ಮತ್ತು ಸ್ಮಾರಕ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಉಡುಪಿಯಲ್ಲಿ ನಡೆದ ಪೆರ್ನಾಲ್ ಸಂದೋಲ ಕಾರ್ಯಕ್ರಮ ಹೀಗೆ ವಿವಿಧ ಕಾರ್ಯಕ್ರಮಗಳು ಬ್ಯಾರಿ ಅಕಾಡೆಮಿಯ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. ಅಲ್ಲದೇ ಅಕಾಡೆಮಿಯು ಅನೇಕ ಕಲಾವಿದರಿಗೆ ಬೇಕಾದಷ್ಟು ಅವಕಾಶವನ್ನು ನೀಡಿ ಅವರ ಜೊತೆಗೆ ಬರಹಗಾರರಿಗೆ, ಭಾಷಣಕಾರರಿಗೆ ಅವಕಾಶವನ್ನು ನೀಡಿ ಬ್ಯಾರಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನೇಕ ಕೆಲಸಗಳನ್ನು ಮಾಡಿದ  ತೃಪ್ತಿ ನಮಗಿದೆ. ಇದಕ್ಕೆಲ್ಲ ಸಹಕಾರ ನೀಡಿದ ಎಲ್ಲಾ ಸದಸ್ಯರಿಗೂ ನಾನು ಹೃದಯ ತುಂಬಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇನ್ನು ತಾಲೂಕು ರಚನೆಯಾದ ನಂತರ ಮೊತ್ತ ಮೊದಲಬಾರಿಗೆ ಉಳ್ಳಾಲದಲ್ಲಿ ತಾಲೂಕು ಮಟ್ಟದ ಬ್ಯಾರಿ ಸಮ್ಮೇಳನ ಬಹಳ ಯಶಸ್ವಿಯಾಗಿ ನಡೆಯಿತು. ಇದಕ್ಕಾಗಿ ನಾನು ಉಳ್ಳಾಲ ತಾಲೂಕಿನ ಎಲ್ಲಾ ಬ್ಯಾರಿ ಸಾಹಿತ್ಯ ಹಾಗೂ ಸಾಮಾಜಿಕ ಮುಖಂಡರಿಗೆ ಹೃದಯ ತುಂಬಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇನ್ನು ಕೋರೋನಾ ಎಂಬ ಮಹಾಮಾರಿಯ ಮಧ್ಯೆ ಇಷ್ಟೆಲ್ಲಾ ಕೆಲಸಗಳನ್ನು, ಕಾರ್ಯಕ್ರಮಗಳನ್ನು ಆಯೋಜಿಸಲು ಅಕಾಡೆಮಿಯ ವತಿಯಿಂದ ಸಾಧ್ಯವಾಗಿರುವುದು ವಿಶೇಷವೇ ಸರಿ. ಇದಕ್ಕಾಗಿ ನಾನು ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಐದು ಕೋಟಿಗಿಂತಲೂ ಹೆಚ್ಚಿನ ಮೌಲ್ಯ ಇರುವಂತಹ ಮಂಗಳೂರಿನ ತೊಕ್ಕೊಟ್ಟು ಜಂಕ್ಷನ್ ನಲ್ಲಿ 25 ಸೆಂಟ್ಸ್ ಜಾಗವನ್ನು ಕರ್ನಾಟಕ ರಾಜ್ಯ ಸರಕಾರವು ಬ್ಯಾರಿ ಸಾಂಸ್ಕೃತಿಕ ಭವನವನ್ನು ಕಟ್ಟಲು ಜಾಗ ಕೊಟ್ಟಿದೆ. ಅಲ್ಲದೇ 6 ಕೋಟಿ ಅನುದಾನವನ್ನು ನೀಡಿ ಸಹಾಯ ಮಾಡಿದೆ. ಹೀಗಾಗಿ ನಾನು ಕರ್ನಾಟಕ ರಾಜ್ಯ ಸರ್ಕಾರದ ಸಿಎಂ ಬಿ.ಎಸ್. ಯಡಿಯೂರಪ್ಪ, ಹಿಂದಿನ ಕನ್ನಡ& ಸಂಸ್ಕೃತಿ ಸಚಿವ ಸಿಟಿ ರವಿ, ಇಂದಿನ ಕನ್ನಡ & ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಇವರಿಗೆ ಕೃತಜ್ಞತೆಗಳನ್ನು ನಾನು ಬ್ಯಾರಿ ಸಮುದಾಯದ ಪರವಾಗಿ ಸಲ್ಲಿಸುತ್ತಿದ್ದೇನೆ. ಮುಂದೆ ಎಲ್ಲಾ ತಾಲೂಕುಗಳಲ್ಲಿಯೂ ತಾಲೂಕು ಮಟ್ಟದ ಬ್ಯಾರಿ ಸಮ್ಮೇಳನ ಆಯೋಜನೆ ಮಾಡಲಾಗುವುದು. ಅದಾದ ನಂತರ ರಾಜ್ಯ, ರಾಷ್ಟ್ರೀಯ ಹಾಗೂ ವಿಶ್ವ ಬ್ಯಾರಿ ಸಮ್ಮೇಳನವನ್ನು ನಡೆಸಲಾಗುವುದು. ನಾವು ಏನೇ ಕೇಳಿದರೂ ನಮ್ಮ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿ ಅನುದಾನವನ್ನು ನೀಡುತ್ತಿರುವ ಕರ್ನಾಟಕ ರಾಜ್ಯ ಸರ್ಕಾರ ಇನ್ನೂ ಕೂಡ ಹೆಚ್ಚಿನ ಅನುದಾನವನ್ನು ಅಕಾಡೆಮಿಗೆ ನೀಡುತ್ತದೆ ಎಂಬ ಭರವಸೆ ನಮಗಿದೆ. ಈ ಮೂಲಕ ಬ್ಯಾರಿ ಸಮುದಾಯದ ಕನಸನ್ನು ನನ್ನ ಅವಧಿಯ ಮುಂಚೆನೇ ನನಸಾಗಿಸುವ ಪ್ರಯತ್ನವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ನಾನು ಒಂದು ರಾಜಕೀಯ ಪಕ್ಷದ ನಾಯಕನಾದರೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿ ಯಾವ ಒಂದು ಸಂದರ್ಭದಲ್ಲೂ ಕೂಡ ಸಾಹಿತ್ಯದಲ್ಲಿ ರಾಜಕೀಯ ನುಸುಳದಂತೆ ನೋಡಿಕೊಂಡಿದ್ದೇನೆ. ಬ್ಯಾರಿ ಅಕಾಡೆಮಿಗಾಗಿ ಪ್ರಾಮಾಣಿಕವಾಗಿ ನಾನು ಕೆಲಸ ಮಾಡುತ್ತಿದ್ದೇನೆ. ನನ್ನ ಕೆಲಸ ನೋಡಿ ಎಲ್ಲಾ ಪಕ್ಷದ ನಾಯಕರು ಅಕಾಡೆಮಿಯ ಕಾರ್ಯಕ್ರಮಕ್ಕೆ ಬಂದು ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ. ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯಲ್ಲೂ ಪ್ರೋತ್ಸಾಹ ನೀಡಿದ, ಬೆಂಬಲ ನೀಡಿದ ರಿಜಿಸ್ಟರ್ ಪೂರ್ಣಿಮಾ ಇವರಿಗೆ, ಅಕಾಡೆಮಿಯ ಎಲ್ಲಾ ಸದಸ್ಯರಿಗೂ,  ಅಕಾಡೆಮಿಯ ಸಿಬ್ಬಂದಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಮಸ್ಕಾರ

 

ಇತೀ ನಿಮ್ಮವ

ರಹೀಂ ಉಚ್ಚಿಲ್

ಇತ್ತೀಚಿನ ನವೀಕರಣ​ : 03-09-2021 11:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080